MASTERMITRA

EDUCATION AND JOBS

Sunday, October 26, 2025

ಬುಡಕಟ್ಟು ಸಮುದಾಯ : ಸಾಮಾನ್ಯ ಸ್ವರೂಪ

  MASTREMITRA       Sunday, October 26, 2025
ಬುಡಕಟ್ಟು ಸಮುದಾಯ : ಸಾಮಾನ್ಯ ಸ್ವರೂಪ


ಮನುಕುಲದ ಆರಂಭದಿಂದಲೂ ಮಾನವ ಹಲವಾರು ಬಗೆಯ ಸಮುದಾಯಗಳಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. 'ಸಮುದಾಯ'ವು ಒಂದು ಪ್ರಮುಖ ಸಾಮಾಜಿಕ ಘಟಕ. 

ಮಾನವನ ಸಮೂಹಜೀವನವು ಕಾಲಕ್ರಮೇಣ ಪ್ರಗತಿಯ ಅನೇಕ ಹಂತಗಳ ಮೂಲಕ ಸಾಗಿ, ಇಂದಿನ ನಾಗರಿಕ ಸಮುದಾಯಗಳ ಹಂತಕ್ಕೆ ತಲುಪಿದೆ. ಭೌತಿಕ ಪರಿಸರದ ವೈವಿಧ್ಯತೆಯಿಂದಾಗಿ ಸಮುದಾಯಗಳ ವಿವಿಧ ಪ್ರಕಾರಗಳು ಅಸ್ತಿತ್ವಕ್ಕೆ ಬಂದವು. ಉದಾ ಹರಣೆಗೆ-ಒಂದು ಚಿಕ್ಕ ಆದಿವಾಸಿ ಬೇಟೆಗಾರರ ಸಮುದಾಯದಿಂದ ಬೃಹತ್ ನಗರ ಸಮುದಾಯದವರೆಗೆ ವಿವಿಧ ಪ್ರಕಾರದ ಸಮುದಾಯಗಳು ಅಸ್ತಿತ್ವದಲ್ಲಿವೆ. 

ಮಾನವನ ಸಾಮದಾಯಕ ಜೀವನದಲ್ಲಿ ಸಾಮಾಜಿಕ ಸಂಬಂಧಗಳು ಹಾಗೂ ಸಹಭಾಗಿತ್ವ ಪ್ರಧಾನ ಅಂಶಗಳಾಗಿರುವುದರಿಂದ, ಇದರ ಬಗ್ಗೆ ಸಮಾಜಶಾಸ್ತ್ರಜ್ಞರು ಅನೇಕ ಅಧ್ಯಯನಗಳನ್ನು ನಡೆಸಿದ್ದಾರೆ. ಸಮುದಾಯವು ಸಮಾಜಶಾಸ್ತ್ರದ ಮೂಲಪರಿಕಲ್ಪನೆಯಾಗಿ ಪರಿಗಣಿಸಲ್ಪಟ್ಟಿದೆ.

ಸಾಮೂಹಿಕ ಜೀವನ ಮಾನವನ ಸಹಜ ಪ್ರವೃತ್ತಿಯಾಗಿದ್ದು, ತನ್ನ ಒಡನಾಡಿಗಳೊಂದಿಗೆ ಇರಲು ಅವನು ಸದಾ ಬಯಸುತ್ತಾನೆ. ಇತರ ಸದಸ್ಯರ ನಿಕಟ ಸಂಪರ್ಕದೊಂದಿಗೆ, ಆತನು ಹಲವಾರು ಬೇಡಿಕೆಗಳನ್ನು ಪೂರೈಸಿಕೊಳ್ಳುತ್ತಾನೆ. ಮಾನವನು ಪ್ರಾಚೀನ ಕಾಲದಿಂದಲೂ ಒಂದಲ್ಲಾ ಒಂದು ಪ್ರದೇಶದಲ್ಲಿ ಸಾಮೂಹಿಕ ಜೀವನ ನಡೆಸಿಕೊಂಡು ಬಂದಿದ್ದಾನೆ. ಈತನ ನಿರಂತರವಾದ ಸಾಮೂಹಿಕ ಜೀವನ, ಸ್ಥಿರ ಸಮುದಾಯಗಳು ಅಸ್ತಿತ್ವಕ್ಕೆ ಬರಲು ಕಾರಣವಾಯಿತು. 

ಹಲವಾರು ಕುಟುಂಬಗಳು ಒಂದೆಡೆ ನೆಲೆಸಲು ಪ್ರಾರಂಭಿಸಿದಾಗ ಸಮುದಾಯ ಅಸ್ತಿತ್ವಕ್ಕೆ ಬಂದಿತೆನ್ನಬಹುದು. ವ್ಯಕ್ತಿ ನಿರಂತರವಾಗಿ ಒಂದೆಡೆ ನೆಲೆಸಲು ಪ್ರಾರಂಭಿಸಿದಾಗ, ತನ್ನ ಸಹ ಸದಸ್ಯರೊಂದಿಗೆ, ತನ್ನ ನೆಲದ ಬಗ್ಗೆ, ಆತನ ಮನದಲ್ಲಿ ಅಪ್ರಜ್ಞಾಪೂರ್ವಕವಾದ ಭಾವನೆಗಳು ಬೆಳೆಯುತ್ತವೆ. ಇವು ಸಮುದಾಯ ರೂಪುಗೊಳ್ಳಲು ಪೂರಕ ಅಂಶಗಳಾಗುವುದಲ್ಲದೆ, ಮೂಲಾಂಶಗಳಾಗಿ ಪರಿವರ್ತಿತಗೊಳ್ಳುತ್ತವೆ.

ಸಾಮಾನ್ಯವಾಗಿ ಸಮುದಾಯವೆಂದರೆ ಒಂದು ನಿರ್ದಿಷ್ಟ ಭೌಗೋಳಿಕ ಎಲ್ಲೆಯೊಳಗೆ ಕಂಡುಬರುವ, ಒಟ್ಟಾಗಿ ವಾಸಿಸುವ ವಿವಿಧ ಬಗೆಯ ಸಾಮಾಜಿಕ ಸಂಬಂಧಗಳನ್ನು ಹೊಂದಿರುವ ಜನಸಮೂಹ. ಭಾಷಿಕರು ಸಮುದಾಯದಲ್ಲಿ ತಮ್ಮ ಸಮಸ್ತ ಜೀವನ ಚಟುವಟಿಕೆಗಳನ್ನು ನಡೆಸುವರು.

ಸಮುದಾಯದಲ್ಲಿ ಸದಸ್ಯರು ಬಹು ಆಸಕ್ತಿಯನ್ನು ಹೊಂದಿದರೂ ಸಾಮಾಜಿಕ ಸಾಮರಸ್ಕೃತೆ ಕಾಪಾಡಿಕೊಂಡಿರುತ್ತಾರೆ. ಹೀಗೆ, ಯಾವುದೇ ಜನರ ಸಮೂಹ, ನಿಶ್ಚಿತ ಭೌಗೋಳಿಕ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸಾಮಾನ್ಯ ಜೀವನದ ಮೂಲಾಂಶಗಳನ್ನು ಹಂಚಿಕೊಂಡು ಅಲ್ಲಿನ ಸದಸ್ಯರು ತಮ್ಮನ್ನು ಆ ನಿಶ್ಚಿತ ಭೌಗೋಳಿಕ ಪ್ರದೇಶದ ಹೆಸರಲ್ಲಿ ಗುರುತಿಸಿಕೊಂಡು, ಅವರಲ್ಲಿ ಐಕ್ಯತೆ ಕಂಡುಬಂದರೆ ಅದನ್ನು ಸಮುದಾಯವೆನ್ನಬಹುದು. 

ಸಮುದಾಯದಲ್ಲಿ ಬಹು ಆಸಕ್ತಿಗನುಗುಣವಾಗಿ ಅದರೊಳಗೇ ಅನೇಕ ಸಂಘ-ಸಂಸ್ಥೆಗಳು ತಲೆ ಎತ್ತುತ್ತವೆ. ತೀರಾ ಸರಳವಾದ ಆದಿವಾಸಿ ಸಮುದಾಯದಿಂದ ತೊಡಗಿ ಸಂಕೀರ್ಣ ಹಂತದ ಗ್ರಾಮ, ನಗರ, ದೇಶ, ಇತ್ಯಾದಿಗಳು ಸಮುದಾಯಕ್ಕೆ ಉದಾಹರಣೆಗಳಾಗಿ ಕಂಡುಬರುತ್ತವೆ.

ಸಮುದಾಯವು ತನ್ನದೇ ಆದಂತಹ ಕೆಲವು ಲಕ್ಷಣಗಳನ್ನು ಹೊಂದಿದೆ. ಮೊದಲನೆಯ ವಾಗಿ ಒಂದು ನಿರ್ದಿಷ್ಟ ಸ್ಥಳೀಯ ಭೌಗೋಳಿಕ ಪ್ರದೇಶದಲ್ಲಿ ಇರುವಂತಹ ಜನಸಂಖ್ಯೆಯ ನೆಲೆಯೇ ಸಮುದಾಯ. ಎರಡನೆಯದಾಗಿ ಸಮುದಾಯವು ಒಂದು ಸ್ಥಳೀಯ ಸಾಮಾಜಿಕ ವ್ಯವಸ್ಥೆಯಾಗಿದೆ. ಮೂರನೆಯದಾಗಿ, ಸಮುದಾಯವು ಪರಸ್ಪರಾವಂಲಬನೆಯ ಸಂಬಂಧ ಗಳನ್ನು ಹೊಂದಿದೆ ಎಂದು ವ್ಯಾಖ್ಯಾನಿಸಲ್ಪಡುತ್ತದೆ. 

ಸಮುದಾಯದಲ್ಲಿ ವ್ಯಕ್ತಿಗಳು ತಮ್ಮ ತಮ್ಮನ್ನು ಅರ್ಥಪೂರ್ಣವಾಗಿ ಗುರುತಿಸಿಕೊಂಡಿರುತ್ತಾರೆ. ಅಲ್ಲದೆ ಸಮೂಹದ ಅನುಭವ ವನ್ನು ಪರಸ್ಪರ ಹಂಚಿಕೊಂಡು ಬಾಳುತ್ತಾರೆ. ಒಂದು ವೇಳೆ ಭೌಗೋಳಿಕವಾಗಿ ಸದಸ್ಯರು ಬೇರೆ ಬೇರೆ ವಾಸಿಸುತ್ತಿದ್ದರೂ ಅವರು ಆ ಸಾಮುದಾಯಿಕ ಭಾವನೆಯನ್ನು ಹೊಂದಿರುತ್ತಾರೆ.

ಸಮಾಜಶಾಸ್ತ್ರದ ಸೂಕ್ಷ್ಮ ವಿಶ್ಲೇಷಣೆಯ ನೆಲೆಯಲ್ಲಿ ನಿರ್ವಚಿಸುವುದಾದರೆ ಸಮು ದಾಯವು ಆರು ಲಕ್ಷಣಗಳನ್ನು ಹೊಂದಿರುತ್ತದೆ.

 ೧. ಜನ ಸಮೂಹ 

೨. ಒಂದು ನಿಶ್ಚಿತ ಭೌಗೋಳಿಕ ಪ್ರದೇಶದಲ್ಲಿ ವಾಸಿಸುವುದು 

೩. ಶ್ರಮವಿಭಜನೆ ಹಾಗೂ ಪರಸ್ಪರ ಅವಲಂಬನೆ 

೪. ಒಂದು ಸಾಮಾನ್ಯ ಸಂಸ್ಕೃತಿ ಮತ್ತು ಜನರ ಚಟುವಟಿಕೆಗಳನ್ನು ಸಂಘಟಿಸುವಂತಹ ಒಂದು ಸಾಮಾಜಿಕ ವ್ಯವಸ್ಥೆಯನ್ನು ಹೊಂದಿರುವುದು 

೫. ಸದಸ್ಯರಲ್ಲಿ ನಾವೆಲ್ಲ ಒಂದೇ ಎಂಬ ಐಕ್ಕಭಾವನೆಯ ಪ್ರಜ್ಞೆ 

೬. ಸದಸ್ಯರು ಸಾಮೂಹಿಕವಾಗಿ ಸಂಘಟಿತ ರೀತಿಯಲ್ಲಿ ವರ್ತಿಸುವುದು.

ಈ ವಿವರಣೆ ಸಮುದಾಯದ ಸ್ವರೂಪ ಹಾಗೂ ಹಲವಾರು ಲಕ್ಷಣಗಳ ಬಗ್ಗೆ ಬೆಳಕು ಚೆಲ್ಲಿದರೂ ಬಹುತೇಕ ಸಮಾಜಶಾಸ್ತ್ರೀಯ ವಿಶ್ಲೇಷಣೆಗಳಲ್ಲಿ, ನಿಶ್ಚಿತ ಭೌಗೋಳಿಕ ಪ್ರದೇಶ, ನಿರ್ದಿಷ್ಟ ಹೆಸರು ಮತ್ತು ಸಾಮುದಾಯಿಕ ಭಾವನೆಗಳನ್ನು ಸಮುದಾಯದ ಪ್ರಧಾನ ಲಕ್ಷಣ ಗಳೆಂದು ಪರಿಗಣಿಸಲಾಗಿದೆ. ಅವುಗಳ ಸ್ವರೂಪ ಹೀಗಿದೆ:

೧. ಒಂದು ಸಮುದಾಯವು ಯಾವಾಗಲೂ ನಿಶ್ಚಿತ ಭೂಪ್ರದೇಶವನ್ನು ಹೊಂದಿರುತ್ತದೆ. ಒಂದು ಅಲೆಮಾರಿ ಸಮುದಾಯವೂ ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ನಿಶ್ಚಿತ ಭೂಪ್ರದೇಶದಲ್ಲಿ ಬೀಡು ಬಿಟ್ಟಿರುತ್ತದೆ. ಆದರೆ ಬಹುತೇಕ ಸಮುದಾಯಗಳು ಶಾಶ್ವತ ನೆಲೆ ಹೊಂದಿರುತ್ತವೆ. ಸಮುದಾಯಗಳಿಗೆ ಈ ಗುಣವಿರುವುದರಿಂದ, ಅಲ್ಲಿನ ಸದಸ್ಯರು ತಾವಿರುವ ಭೌತಿಕ ನೆಲೆಯ ಬಗ್ಗೆ ಆಳವಾದ ಆತ್ಮೀಯ ಭಾವನೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ನಿರ್ದಿಷ್ಟ ಭೂಪ್ರದೇಶದ ಸದಸ್ಯರಿಗೆ ಒಂದೆಡೆ ನೆಲೆಸಲು ಅವಕಾಶ ಸೃಷ್ಟಿಸುವುದರಿಂದ, ಅವರ ನಡುವೆ ನಿರಂತರವಾದ ಸಂಪರ್ಕ ಹಾಗೂ ಅಂತಕ್ರಿಯೆಗಳು ಏರ್ಪಟ್ಟು ಹಲವಾರು ಬಗೆಯ ಸಾಮಾಜಿಕ ಸಂಬಂಧಗಳು ಕಂಡುಬರುತ್ತವೆ.

ನಿಶ್ಚಿತ ಭೂಪ್ರದೇಶದ ಕಾರಣದಿಂದ ಸಮುದಾಯದಲ್ಲಿ ಸದಸ್ಯರು ಮಾನಸಿಕವಾಗಿ ಭದ್ರತೆಯ ಭಾವನೆಯನ್ನು ಹೊಂದಿರುತ್ತಾರೆ. ಸಮುದಾಯದ ಭೌತಿಕ ನೆಲೆಯು ಅಲ್ಲಿನ ಸದಸ್ಯರ ಜೀವನದ ಸಮಸ್ತ ಚಟುವಟಿಕೆಗಳ ಮೇಲೆ ನಿರ್ಣಾಯಕವಾದ ಪ್ರಭಾವವನ್ನು ಬೀರುತ್ತದೆ. 

ಆದರೆ ಆಧುನಿಕ ಜಗತ್ತಿನಲ್ಲಿ ಶೀಘ್ರಗತಿಯ ಸಾರಿಗೆ ಸಂಪರ್ಕ ಹಾಗೂ ಸಂವಹನ ಸಾಧನಗಳ ಪ್ರಗತಿಯಿಂದಾಗಿ ಸಮುದಾಯದ ಸದಸ್ಯರು ತಮ್ಮ ಭೌತಿಕ ನೆಲೆಯ ಪರಿಧಿ ವಿಸ್ತಾರ ಗೊಳ್ಳಲೂ ಸಹ ಕಾರಣವಾಗಿದೆ. ಸಮುದಾಯ ಬೃಹತ್ತಾದಂತೆಲ್ಲ ಸಾಮಾಜಿಕ ಸಾಮರಸ್ಯ ಹಾಗೂ ಭೌತಿಕ ಪ್ರದೇಶ ಮೂಲಭೂತವಾದ ಅಂಶಗಳಾಗಿರುವುದಲ್ಲದೆ ಕ್ರಮೇಣ ಈ ಭೌತಿಕ ಪರಿಸರವೇ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರವಾಗಿಯೂ ಮಾರ್ಪಾಡಾ ಗುತ್ತದೆ. 

ಈ ಅಂಶವು ಸಮುದಾಯದಲ್ಲಿ ಭೌತ ಹಾಗೂ ಅಭೌತ ಸಂಸ್ಕೃತಿಗಳ ಬೆಳವಣಿಗೆಗೆ ಕಾರಣವಾಗಿ ಸಮುದಾಯಗಳು ಸಂಕೀರ್ಣಗೊಳ್ಳಲು ಅವಕಾಶ ಕಲ್ಪಿಸುತ್ತದೆ.

೨. ಪ್ರತಿಯೊಂದು ಸಮುದಾಯಕ್ಕೂ ನಿರ್ದಿಷ್ಟ ಹೆಸರಿರುತ್ತದೆ. ಹೆಚ್ಚಾಗಿ ಈ ಹೆಸರು ಪ್ರಾದೇಶಿಕ ನೆಲೆಯಿಂದ ಬರುತ್ತದೆ. ಅಂದರೆ ಸಮುದಾಯದಲ್ಲಿ ಅನನ್ಯತೆಯ ಪ್ರಜ್ಞೆಯನ್ನು ಬೆಳೆಸಲು ಇದು ಕಾರಣವಾಗುತ್ತದೆ.

೩. ಸದಸ್ಯರು ಪರಸ್ಪರ ಹೊಂದಿರುವ ಸಾಮುದಾಯಕ ಭಾವನೆಯೂ ಸಹ ಸಮು ದಾಯದ ನಿರ್ಮಾಣದಲ್ಲಿ ಅವಶ್ಯಕವಾಗಿರುತ್ತದೆ. ಸಾಮುದಾಯಕ ಭಾವನೆ ಸಮುದಾಯದ ಸದಸ್ಯರಲ್ಲಿ ಮೂಡಬೇಕಾದರೆ, ನಾವು ನಮ್ಮವರು, ನಮ್ಮ ಜನ ಎಂಬ ಭಾವನೆಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿರುತ್ತದೆ. ನಾವೆಲ್ಲರೂ ಈ ಸಮುದಾಯಕ್ಕೆ ಸೇರಿದವರು, ಇದು ನಮ್ಮ ಸಮುದಾಯ ಎಂಬ ಭಾವನೆಯೇ ಸಾಮುದಾಯಕ ಭಾವನೆ. 

ಸಮುದಾಯದ ಸದಸ್ಯರು ಪರಸ್ಪರ ಸುಖ ದುಃಖಗಳಲ್ಲಿ ಭಾಗಿಯಾಗುವ ಮನೋಭಾವನೆಯನ್ನು ಹೊಂದಿರುತ್ತಾರೆ. ಅವರಲ್ಲಿ ಮಾನಸಿಕವಾಗಿ ಸಮಾನ ಆಸಕ್ತಿ, ಒಲವುಗಳು ಇದ್ದು ಪರಸ್ಪರ ಆತ್ಮೀಯ ಭಾವನೆ ಬೆಳೆಯಲು ಕಾರಣವಾಗುತ್ತದೆ. ಇವೆಲ್ಲವೂ ಸಾಮುದಾಯಕ ಭಾವನೆಯ ಬೆಳವಣಿಗೆಗೆ ಪೂರಕವಾದುವು.

ಸಮುದಾಯದ ಜನರಲ್ಲಿ ಸಮಾನ ಅಭಿರುಚಿಗಳು, ದೃಷ್ಟಿಕೋನ, ಜೀವನ ಶೈಲಿ ಇದ್ದಾಗ ಮಾತ್ರ ಸಾಮುದಾಯಕ ಭಾವನೆ ಜಾಗೃತಗೊಂಡಿರುತ್ತದೆ. ಸುದೀರ್ಘ ಕಾಲದವರೆಗೆ ಜನರು ಒಂದೆಡೆ ನೆಲೆಸಿದಾಗ, ಸಹಜವಾಗಿ ತಮ್ಮ ಜನರೊಂದಿಗೆ ಹಾಗೂ ನೆಲದೊಂದಿಗೆ ಭಾವನಾತ್ಮಕ ಬೆಸುಗೆಯನ್ನು ಹೊಂದುತ್ತಾರೆ. ಇದು ಸದಸ್ಯರಿಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. 

ವ್ಯಕ್ತಿ ತನ್ನ ಸಮುದಾಯದೊಂದಿಗಿನ ನಂಟನ್ನು ಸುಲಭವಾಗಿ ಕಡಿದುಕೊಳ್ಳಲಾರ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ, ನಾಗರಿಕತೆ ಬೆಳೆದಂತೆಲ್ಲ ಸಮುದಾಯಗಳ ನಡುವಿನ ಭೌತಿಕದೂರ ಕಡಿಮೆಯಾಗುತ್ತಿದೆ. ನಿರ್ದಿಷ್ಟವಾಗಿ ಸಮುದಾಯಗಳ ನಡುವೆ ಸೀಮಾರೇಖೆ ಯನ್ನು ಗುರುತಿಸಲು ಕಷ್ಟವಾಗುತ್ತಿದೆ. ಸಾರಿಗೆ ಮತ್ತು ಸಂಪರ್ಕ ಮಾಧ್ಯಮಗಳ ಕ್ಷೇತ್ರಗಳಲ್ಲಿ ಉಂಟಾಗಿರುವ ಮಹತ್ತರ ಬೆಳವಣಿಗೆಯಿಂದಾಗಿ ಹಿಂದೆ ಇದ್ದ ಸ್ವಪರಿಪೂರ್ಣ ಹಾಗೂ ಸ್ವಯಂ ತೃಪ್ತ ಸಮುದಾಯಗಳು ಕಣ್ಮರೆಯಾಗಿವೆ. ಆದರೂ ಕೆಲವು ಸಮುದಾಯಗಳು ಸಾಮಾಜಿಕ ಸಂಪರ್ಕವನ್ನು ಉಳಿಸಿಕೊಂಡು, ಸಾಮುದಾಯಕ ಭಾವನೆಯನ್ನು ಜಾಗೃತವಾಗಿರಿಸಿ ಕೊಂಡಿವೆ.

ಸಮುದಾಯಗಳು ಭೌತಿಕ ನೆಲೆಯ ವ್ಯಾಪ್ತಿ ಹಾಗೂ ಜನಸಂಖ್ಯೆಯ ಗಾತ್ರವನ್ನು ಆಧರಿಸಿ ವ್ಯತ್ಯಾಸ ಹೊಂದುವವು. ಕೆಲವೇ ಕುಟುಂಬಗಳಿರುವ ಚಿಕ್ಕ ಸಮುದಾಯಗಳಿರ ಬಹುದು. ಇಲ್ಲವೆ ಅಪರಿಮಿತ ಕುಟಂಬಗಳಿರುವಂತಹ ಬೃಹತ್ ಸಮುದಾಯಗಳಿರಬಹುದು. 

ಸಮುದಾಯಗಳ ನಡುವಿನ ಸೀಮಾರೇಖೆಯನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಿಲ್ಲ. ಅವುಗಳ ಗಾತ್ರಕ್ಕನುಗುಣವಾಗಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಲಾಗುತ್ತದೆ. ಉದಾಹರಣೆಗೆ, 'ಹಳ್ಳಿ', 'ಪಟ್ಟಣ', 'ನಗರ', 'ರಾಜ್ಯ', 'ದೇಶ' ಇತ್ಯಾದಿ. ಬೃಹತ್ ಸಮುದಾಯವಾದ ರಾಷ್ಟ್ರ ಸಮುದಾಯದೊಳಗೆ ಎಲ್ಲ ರೀತಿಯ ಸಮುದಾಯಗಳು ಇರುತ್ತವೆ. ಬಹುರಾಷ್ಟ್ರೀಯ ಸಂಸ್ಕೃತಿಯ ಕಾರಣದಿಂದಾಗಿ ಸಮುದಾಯ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಂಡು ವಿಶ್ವ, ಸಮುದಾಯದತ್ತ ಸಾಗುತ್ತಿದೆ.

೪. ಸಮುದಾಯಗಳಲ್ಲಿ ಜನರು ಒಂದೆಡೆ ಶಾಶ್ವತವಾಗಿ ನೆಲೆಸುವ ಕಾರಣದಿಂದ, ಅದು ಸ್ಥಿರತೆಯ ಗುಣವನ್ನು ಹೊಂದಿರುತ್ತದೆ. ಸ್ವಾಭಾವಿಕವಾಗಿ ವ್ಯಕ್ತಿಗಳ ಆಗಮನ ಮತ್ತು ನಿರ್ಗಮನ ಪ್ರಕ್ರಿಯೆ ನಡೆಯುತ್ತಿರುವಂತೆ ಸಮುದಾಯದ ಜೀವನ ಕ್ರಿಯೆ ಅವ್ಯಾಹತ ವಾಗಿ ಸಾಗುತ್ತಿರುತ್ತದೆ. ಮೂಲಭೂತ ಉದ್ದೇಶಗಳನ್ನು ಉಳಿಸಿಕೊಳ್ಳುತ್ತಲೇ ಪರಿವರ್ತನೆಗೆ ಅದು ತನ್ನನ್ನು ತೆರೆದುಕೊಂಡಿರುತ್ತದೆ. ವ್ಯಕ್ತಿ ಸಮುದಾಯದ ಸದಸ್ಯನಾಗಿದ್ದುಕೊಂಡು ಸಂಪಾದಿಸಿದ ಭೌತಿಕ ಸಂಪತ್ತು, ಆತನನ್ನು ಶಾಶ್ವತವಾಗಿ ಒಂದೆಡೆ ನೆಲೆಯೂರುವಂತೆ ಮಾಡುತ್ತದೆ. ಇದರಿಂದಾಗಿ ಸಮುದಾಯಗಳು ಸ್ಥಿರ ಸ್ವರೂಪದವುಗಳಾಗಿರುತ್ತವೆ.

೩. ಉದ್ದೇಶಿತ ಹಾಗೂ ಬುದ್ಧಿಪೂರ್ವಕ ಪ್ರಯತ್ನಗಳಿಲ್ಲದೆ, ಸಮುದಾಯವು ತನ್ನಷ್ಟಕ್ಕೆ ತಾನೇ ರೂಪುಗೊಳ್ಳುತ್ತದೆ. ವ್ಯಕ್ತಿಯು ಒಂದು ಸಮುದಾಯದಲ್ಲಿ ಹುಟ್ಟುವುದು ಅದರ ಸದಸ್ಯನಾದಂತೆಯೇ. ಸದಸ್ಯನಾಗಲು ಬೇರೆ ಇನ್ನಾವುದೇ ಅರ್ಹತೆಗಳು ಅಗತ್ಯವಿಲ್ಲ. ಇದರ ಅಸ್ತಿತ್ವಕ್ಕೆ ಪೂರ್ವಸಿದ್ದತೆಗಳು ಅಥವಾ ನೀತಿ ನಿರೂಪಣೆಗಳು ಅವಶ್ಯಕವಿಲ್ಲ. ಸಮುದಾಯವು ಸ್ವತಃ ಪ್ರವರ್ತಿತವಾದದ್ದಾಗಿ, ನಿಧಾನಗತಿಯಲ್ಲಿ ವಿಕಾಸ ಹೊಂದುತ್ತದೆ. ಒಂದು ಪ್ರದೇಶದಲ್ಲಿ ಲಭ್ಯವಾಗುವಂತಹ ಅನುಕೂಲತೆಗಳು ಸಮುದಾಯದ ಹುಟ್ಟಿಗೆ ಕಾರಣವಾಗುತ್ತವೆ.

ಪ್ರತಿಯೊಂದು ಸಮುದಾಯವು ತನ್ನದೇ ಸಾಮಾಜಿಕ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುತ್ತದೆ. ಸಮುದಾಯವು ವಿಕಾಸಗೊಂಡಂತೆ ತನ್ನ ಸದಸ್ಯರ ನಡೆವಳಿಕೆಗಳನ್ನು ನಿರ್ದೇಶಿಸಲು ಸಾಮಾಜಿಕ ನಿಯಮಗಳನ್ನು ರೂಪಿಸುತ್ತದೆ. ಆಯಾ ಸಮುದಾಯಗಳ ಸ್ವರೂಪದ ಆಧಾರದ ಮೇಲೆ ನಿಯಮಗಳು ರಚಿತವಾಗುತ್ತವೆ.

ಸಾಮಾನ್ಯವಾಗಿ ಬುಡಕಟ್ಟು ಸಮುದಾಯವೆಂದರೆ ಸಮಕಾಲೀನ ಸಮಾಜದ ಮಧ್ಯ ಇದ್ದುಕೊಂಡು ಪ್ರತ್ಯೇಕವಾದ ಬದುಕನ್ನು ನಡೆಸುತ್ತ ತಮ್ಮದೇ ಆದ ಸಾಂಸ್ಕೃತಿಕ ಮೌಲ್ಯ ಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವ ಒಂದು ಸಾಮಾಜಿಕ ಗುಂಪಿನ ಜನರು ಎಂದು ಕರೆಯಬಹುದು. 

ಬುಡಕಟ್ಟು ಸಮುದಾಯಗಳು ಪ್ರತ್ಯೇಕವಾದ ಉಪಭಾಷೆ ಹೊಂದಿ ರುತ್ತವೆ. ವಿಶಿಷ್ಟ, ಜೀವನ ವಿಧಾನ ಅವರದಾಗಿರುತ್ತದೆ. ಮದುವೆ, ಹಬ್ಬ ಹರಿದಿನಗಳಲ್ಲಿ ಬ್ರಾಹ್ಮಣ ಪುರೋಹಿತರನ್ನು ಕರೆಯುವುದಿಲ್ಲ. ಅಸಂಸ್ಕೃತಿಗೆ ಒಳಗಾಗದೆ ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡಿರುತ್ತಾರೆ. ಬುಡಕಟ್ಟು ಸಮುದಾಯದವರು ಹೆಚ್ಚಾಗಿ ಮಾಂಸಾಹಾರಿಗಳಾಗಿದ್ದು ದೃಢಕಾಯರಾಗಿರುತ್ತಾರೆ. 

ನಗರ ಇಲ್ಲವೆ ಗ್ರಾಮೀಣ ಪ್ರದೇಶಗಳಿ ಗಿಂತ ಪ್ರತ್ಯೇಕಗೊಂಡು ಕಾಡುಮೇಡುಗಳಲ್ಲಿ, ಬೆಟ್ಟಗುಡ್ಡಗಳಲ್ಲಿ ವಾಸವಾಗಿರುತ್ತಾರೆ. ಈ ದೃಷ್ಟಿಯಿಂದ ಬುಡಕಟ್ಟು ಸಂಸ್ಕೃತಿ ತನ್ನದೇ ಆದ ಅನನ್ಯತೆಯಿಂದ ಕೂಡಿದೆ.

ಸಾಮಾನ್ಯವಾಗಿ ಬುಡಕಟ್ಟು, ಬದುಕಿನ ಕ್ರಮ ಏಕಪ್ರಕಾರವಾಗಿರುತ್ತದೆ. ಅದರ ಮೇಲು ಪದರದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿರುತ್ತದೆಯೇ ಹೊರತು ಆಂತರದಲ್ಲಿ ಬಹುಮಟ್ಟಿಗೆ ಜಗತ್ತಿನಾದ್ಯಂತ ಸಾಮ್ಯತೆಗಳು ಕಂಡುಬರುತ್ತವೆ. ಬುಡಕಟ್ಟುಗಳ ಬದುಕಿನಲ್ಲಿ ಸಾಮಾನ್ಯವಾಗಿ ಸೌಹಾರ್ದತೆಗೆ ಒತ್ತು ಕೊಡಲಾಗುತ್ತವೆ.

ಪ್ರತಿಯೊಂದು ಬುಡಕಟ್ಟು, ಅರಣ್ಯದ ಉತ್ಪನ್ನಗಳಿಂದ ಬದುಕುತ್ತವೆ. ಅವರ ಸಾಮಾಜಿಕ ಬದುಕಿನಲ್ಲಿ ಸ್ತ್ರೀ ಪುರುಷರ ಮಧ್ಯ ಹೆಚ್ಚು ಅಂತರವಿಲ್ಲ. ಹೆಣ್ಣು ನಾಗರಿಕ ಸಮಾಜಕ್ಕೆ ಭಾರವಾಗಿರುವಂತೆ ಬುಡಕಟ್ಟು ಸಮಾಜಕ್ಕೆ ಭಾರವಲ್ಲ. ಆಕೆಯು ದುಡಿಯುವ ಜೀವಿಯಾಗಿ ಪುರುಷರ ಸಮಾನ ಎನಿಸಿಕೊಳ್ಳುವಂತೆ ಬದುಕುತ್ತಾಳೆ. ಲಿಂಗ ಸಮಾನತೆ ಬುಡಕಟ್ಟು ಸಂಸ್ಕೃತಿಯ ಅನನ್ಯತೆಯಾಗಿದೆ.

ಬುಡಕಟ್ಟುಗಳ ಅಧ್ಯಯನವು ಒಂದು ಪ್ರದೇಶದ ಗಿರಿಜನ ಸಂಸ್ಕೃತಿಯನ್ನು ತಿಳಿಯುವಲ್ಲಿ ಬಹಳ ಸಹಕಾರಿಯಾಗುತ್ತದೆ. ಅಲ್ಲದೆ ಒಟ್ಟಾರೆ ಮಾನವ ಸಂಸ್ಕೃತಿಯ ಸ್ವರೂಪವನ್ನು ತಿಳಿಯಲು ಬುಡಕಟ್ಟು ಸಂಸ್ಕೃತಿಯ ಅಧ್ಯಯನ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಅದಿವಾಸಿ ಬುಡಕಟ್ಟುಗಳ ಅಧ್ಯಯನ ನಡೆದಿದೆ. ಕರ್ನಾಟಕದಲ್ಲಿ ಬುಡಕಟ್ಟುಗಳು ತಮ್ಮದೇ ಆದ ಅನನ್ಯತೆಯಿಂದ ಶ್ರೀಮಂತಗೊಂಡಿವೆ. ಭೌಗೋಳಿಕ ಹಾಗೂ ಸಾಂಸ್ಕೃತಿಕ ಆಧಾರಗಳ ಮೇಲೆ ಕರ್ನಾಟಕದ ಬುಡಕಟ್ಟುಗಳನ್ನು ಎರಡು ವಲಯಗಳಲ್ಲಿ ಅಡಕಗೊಳಿಸುತ್ತಾರೆ.

ಬುಡಕಟ್ಟು ಸಮುದಾಯಗಳ ಸಾಮಾನ್ಯ ಸ್ವರೂಪ ಹೀಗಿದೆ:

ಡಿ. ವ್ಯಕ್ತಿ, ವ್ಯಕ್ತಿಗಳ ನಡುವೆ ಸಂಘರ್ಷ ಸಂಭವಿಸಿದಾಗ ಹಲವು ರೀತಿಯ ಹಾನಿಯಾಗು ವುದು ಸಹಜ. ಅದನ್ನು ತಪ್ಪಿಸುವ ವ್ಯವಸ್ಥೆಯೇ ಹೊಂದಾಣಿಕೆ. ಸಂಘರ್ಷವಿಲ್ಲದಿದ್ದರೆ ಹೊಂದಾಣಿಕೆಯ ಅಗತ್ಯ ಕಂಡುಬರುತ್ತಿರಲಿಲ್ಲ. ಬದುಕನ್ನು ಹಸನು ಮಾಡಿಕೊಳ್ಳುವಾಗ ಹೊಂದಾಣಿಕೆಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲೇಬೇಕು. ಬುಡಕಟ್ಟು ಸಮುದಾಯಗಳು ಕಾಡಿನಲ್ಲಿರುವುದರಿಂದ ಹೊಂದಾಣಿಕೆಯಿಂದ ಬದುಕುವುದು ಅವರಿಗೆ ಅನಿವಾರವಾಗಿದೆ.

ಹೊಂದಾಣಿಕೆಯು ಕೆಲವು ವೇಳೆ ಇಬ್ಬರ ಅರಿವಿನಿಂದ ನೇರವಾಗಿ ಉಂಟಾಗಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಬಲಪ್ರಯೋಗದಿಂದಲೂ, ಒಪ್ಪಂದದಿಂದಲೂ, ಪರಸ್ಪರ ಅರಿವಿನಿಂದಲೂ, ಮನಃಪರಿವರ್ತನೆಯಿಂದಲೂ, ಉದಾತ್ತ ಭಾವನೆಯಿಂದಲೂ ಸಂದರ್ಭಕ್ಕೆ ತಕ್ಕಂತೆ ಆಗುತ್ತದೆ. ಇದರಿಂದ ಜನತೆಯಲ್ಲಿ ಸಹಕಾರ, ಸಹಬಾಳ್ವೆ, ಉದಾರತೆ ಬೆಳೆಸಿಕೊಳ್ಳಲು ಸಹಾಯಕವಾಗುವುದು. ವೈವಿಧ್ಯಮಯ ಬದುಕನ್ನು ರೂಪಿಸಿಕೊಂಡು ನೆಮ್ಮದಿ, ಶಿಸ್ತು, ಸಹಜೀವನ, ಸಹಕಾರ ಪಡೆಯುವಲ್ಲಿ ಹೊಂದಾಣಿಕೆಯ ಮೂಲಕ ಅವುಗಳನ್ನು ಪುನ‌ರ್ ಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಲೆ ಇರುತ್ತವೆ.

೨. ಸಹಕಾರ ಗಿರಿಜನ ಸಮಾಜ ಜೀವನದ ಮಖ್ಯವಾಹಿನಿಯಾಗಿದೆ. ಸಹಕಾರವಿಲ್ಲದೆ ಸಮಾಜವಿಲ್ಲದೆ ನೆಮ್ಮದಿಯಿಂದ ಬದುಕಲಾಗದು. ಇದಕ್ಕಾಗಿಯೇ ಅವರು ಸಹಕಾರಿಂದ ಬಾಳ್ವೆ ನಡೆಸಿ ತಮಗೆ ಅಗತ್ಯವಾದ ಸೌಲಭ್ಯಗಳನ್ನು ಪಡೆಯುವರು. 

ಇದರ ಅರ್ಥ 'ಜೊತೆಗೂಡಿ ಕೆಲಸ ಮಾಡು' ಅಥವಾ 'ದುಡಿಯುವುದು'. ಒಂದು ಸಾಮಾನ್ಯ ಗುರಿಯನ್ನು ತಲುಪಲು ಇಬ್ಬರು ಇಲ್ಲವೇ ಹೆಚ್ಚು ಜನರು ಒಟ್ಟಿಗೆ ಸೇರಿ ಕೆಲಸ ಮಾಡುವುದನ್ನೇ 'ಸಹಕಾರ' ಎನ್ನುವರು. ಸಹಕಾರವನ್ನು ಎರಡು ಪ್ರಕಾರಗಳಾಗಿ ಗುರ್ತಿಸಬಹುದು.

ಅ. ಪ್ರತ್ಯಕ್ಷ ಸಹಕಾರ : 

ತಮ್ಮ ಉದ್ದೇಶಗಳನ್ನು ಸಾಧಿಸಲು ಗಿರಿಜನರು ಒಮ್ಮತದಿಂದ ದೈಹಿಕ ಹಾಗೂ ಮಾನಸಿಕವಾಗಿ ಒಂದುಗೂಡಿ ದುಡಿಯುವುದು. 

ಆ. ಪರೋಕ್ಷ ಸಹಕಾರ :

ಒಂದೇ ಬಗೆಯ ಸಾಧನೆಗಾಗಿ ಗಿರಿಜನರು ವಿಭಿನ್ನ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವರು.


logoblog

Thanks for reading ಬುಡಕಟ್ಟು ಸಮುದಾಯ : ಸಾಮಾನ್ಯ ಸ್ವರೂಪ

Newest
You are reading the newest post

No comments:

Post a Comment